ಗಗಾರಿನ್, ಯೂರಿ ಅಲೆಕ್ಸಿಯೆವಿಚ್

1934-1968 ; ಅಂತರಿಕ್ಷ ಯಾತ್ರೆ ಮಾಡಿದ ಪ್ರಥಮ ಮಾನವ. ಸೋವಿಯತ್ ದೇಶದವ. ಜನನ ಸ್ಮೂಲೆನ್‍ಸ್ಕ್ ಪ್ರಾಂತ್ಯದ ರೈತ ಕುಟುಂಬವೊಂದರಲ್ಲಿ 1941ರಲ್ಲಿ ಶಾಲೆಗೆ ಸೇರಿದರೂ ನಾಟ್ಸಿಗಳ ಆಕ್ರಮಣದಿಂದಾಗಿ ಈತನ ವಿದ್ಯಾಭ್ಯಾಸ ಮೊಟಕಾಯಿತು. ಎರಡನೆಯ ಮಹಾಯುದ್ಧದ ಅನಂತರ ವೃತ್ತಿ ಶಿಕ್ಷಣ ಮುಗಿಸಿ ಎರಕಗಾರನ ಅರ್ಹತೆ ಪಡೆದ. ಅನಂತರ ಸರಾತೋವ್‍ನ ತಾಂತ್ರಿಕ ಶಾಲೆಯಲ್ಲಿ ಅಭ್ಯಸಿಸಿ 1955ರಲ್ಲಿ ಪದವೀಧರನಾದ. ವಿಮಾನದಲ್ಲಿ ಹಾರಾಡುವ ಉತ್ಕಟ ಆಸೆ ಶಾಲೆಯಲ್ಲಿದ್ದಾಗಲೇ ಇತ್ತಾಗಿ ಸರಾತೋವ್ ಏರೊಕ್ಲಬ್ಬಿಗೆ ಸೇರಿದ. ಅನಂತರ 1955ರಲ್ಲಿ ಓರೆನಬರ್ಗಿನ ವಾಯುದಳದ ಶಾಲೆ ಸೇರಿ ಪದವೀಧರನಾದ (1957).

	ಇದೇ ಹೊತ್ತಿಗೆ ಅಂತರಿಕ್ಷ ವಿಜ್ಞಾನದಲ್ಲಿ ಆಗಾಧ ಪ್ರಗತಿ ಆಗುತ್ತಿತ್ತು. 1957ರಲ್ಲಿ ರಷ್ಯ ಸ್ಫುಟ್ನಿಕ್-1ನ್ನು ಹಾರಿಸಿತ್ತು. ಸ್ಫುಟ್ನಿಕ್-2ರಲ್ಲಿ ಲೈಕ ಎಂಬ ನಾಯಿಯನ್ನು ಕಳಿಸಿ ಜೀವವೈಜ್ಞಾನಿಕ ಪ್ರಯೋಗಗಳನ್ನು ನಡೆಸಿತ್ತು. ಮಾನವ ಅಂತರಿಕ್ಷಕ್ಕೆ ಪ್ರಥಮ ಹೆಚ್ಚೆ ಇಡುವ ಕಾಲ ಸಮೀಪಿಸುತ್ತಿತ್ತು. ಹೊಸ ಸಾಹಸಗಳ ಅವಕಾಶಕ್ಕಾಗಿ ಕಾಯುತ್ತಿದ್ದ ಗಗಾರಿನ್ ಅಂತರಿಕ್ಷ ಯಾತ್ರಿಗಳ ಗುಂಪಿಗೆ ಸೇರಲು ಪ್ರವೇಶಪತ್ರ ಕಳಿಸಿ ಯಶಸ್ವಿಯಾದ, ವಿಜ್ಞಾನಿಗಳು ಮತ್ತು ಎಂಜಿನಿಯರುಗಳು ವೊಸ್ಟೋಕ್-1 ಗಗನ ನೌಕೆಯ ನಿರ್ಮಾಣದಲ್ಲಿದ್ದಾಗ ಗಗಾರಿನ್ ಮತ್ತು ಆತನ ಸಂಗಡಿಗರು ಅಂತರಿಕ್ಷ ಯಾತ್ರೆಯ ಕಠಿಣ ತರಬೇತಿಯನ್ನು ಪಡೆದರು. ಈ ವೋಸ್ಟೋಕ್-1ರಲ್ಲಿ ಅಂತರಿಕ್ಷಕ್ಕೆ ಹಾರಲು ಗಗಾರಿನ್ ಆಯ್ಕೆಯಾದ. 

	1961ರ ಏಪ್ರಿಲ್ 12, ಬೆಳಿಗ್ಗೆ 9 ಗಂ. 7 ಮಿನಿಟು (ಮಾಸ್ಕೊ ಕಾಲ) ವೋಸ್ಟೊಕ್-1 ಬಾಹ್ಯಕಾಶ ನೌಕೆಯನ್ನು ರಾಕೆಟ್ಟಿನಿಂದ ಹಾರಿಸಲಾಯಿತು. ನೌಕೆಯ ಪೀಠದಲ್ಲಿ ಗಗಾರಿನ್ ಭದ್ರವಾಗಿದ್ದ. 302 ಕಿ. ಮೀ. ಉಚ್ಚಸ್ಥಾನದ 175 ಕಿ.ಮೀ. ನೀಚಸ್ಥಾನ ಪಥದಲ್ಲಿ 4,725 ಕಿ. ಗ್ರಾಂ. ತೂಕದ ಈ ನೌಕೆ 28,000 ಕಿ.ಮೀ./ಗಂ. ವೇಗದಲ್ಲಿ 108 ಮಿನಿಟುಗಳ ಪ್ರಯಾಣಮಾಡಿ 10 ಗಂ.55 ಮಿ.ಗೆ ಪೂರ್ವನಿಯೋಜಿತ ಪ್ರದೇಶದಲ್ಲಿಳಿಯಿತು. ವೋಸ್ಟೋಕ್-1ರ ಯಶಸ್ವಿ ಉಡ್ಡಯನ ಅಂತರಿಕ್ಷ ಸಂಶೋಧನೆಯ ಪ್ರಮುಖ ಮೈಲಿಗಲ್ಲಾಯಿತು. ಭಾರರಹಿತ ಸ್ಥಿತಿಯಲ್ಲಿ ಮಾನವ ತನ್ನ ಕಾರ್ಯಗಳನ್ನು ಸಹಜವಾಗಿ ಮಾಡಬಲ್ಲ ಎನ್ನುವುದು ದೃಢಪಟ್ಟಿತು.

	ಗಗಾರಿನನ ಈ ಸಾಹಸಕ್ಕಾಗಿ ರಷ್ಯ ಅವನಿಗೆ ಸೋವಿಯತ್ ದೇಶದ ಧೀರ (ಹಿರೋ ಆಫ್ ದಿ ಸೋವಿಯತ್ ಯೂನಿಯನ್) ಮತ್ತು ಲೆನಿನ್ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು. 1968ರ ಮಾರ್ಚ್ 27ರಂದು ಪರೀಕ್ಷಾರ್ಥ ವಿಮಾನ ಹಾರಾಟದಲ್ಲಿದ್ದಾಗ ಅಪಘಾತಕ್ಕೀಡಾಗಿ ಗಗಾರಿನ್ ಅಸುನೀಗಿದ.	    (ಎಸ್.ಎಂ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ